ಮನ್ರೋ, ತಾಮಸ್
(1761-1827) ಈಸ್ಡ್ ಇಂಡಿಯ ಕಂಪನಿಯ ಸೇವೆಯಲ್ಲಿದ್ದ ಯೋಧ. ಆಡಳಿತಗಾರ. ಸ್ಕಾಟ್ಲೆಂಡಿನ ಗ್ಮಾಸ್ಗೂವಿನಲ್ಲಿ ಅಲ್ಲಿಯೇ ಶಿಕ್ಷಣ ಪಡೆದು ಈಸ್ಟ್ ಇಂಡಿಯಾ ಕಂಪನಿಯ ಮದ್ರಾಸ್ ಸೈನ್ಯ ಸೇರಿದ. (1780). ಸರ್. ಹೆಕ್ಟರ್ ಮನ್ರೋ ಮತ್ತು ಸರ್ ಐರ್ ಕೂಟ್ ಇವರ ನೇತೃತ್ವದಲ್ಲಿ 1780ರಿಂದ 83ರ ತನಕ ನಡೆದ ಮೈಸೂರು ಯುದ್ಧದಲ್ಲಿ ಭಾಗವಹಿಸಿದ. 1781ರಲ್ಲಿ ನಡೆದ ಪೊಲಿಲೂರು ಕದನದಲ್ಲಿಯೂ ಪಾಲ್ಗೊಂಡಿದ್ದ. ಲೆಫ್ಟಿನೆಂಟ್ ಆಗಿ ಟಿಪ್ಪುವಿನ ವಿರುದ್ಧ ದಂಡಯಾತ್ರೆಯಲ್ಲಿ (1790) ಬಾರಾ ಮಹಲ್ ಕ್ಷೇತ್ರದಲ್ಲಿ ಭಾಗವಹಿಸಿದ್ದ. ಅನಂತರ ಬ್ರೀಟಿಷರು ಆಕ್ರಮಿಸಿದ್ದ ಪ್ರದೇಶಗಳ ಭಾಗವೊಂದನ್ನು ಮೈಸೂರಿನ ರಾಜಮನೆತನಕ್ಕೆ ಕೊಡಲು ತೀರ್ಮಾನಿಸಿದಾಗ, ಅವುಗಳ ವಿವರಗಳನ್ನು ವ್ಯವಸ್ಥೆಗೊಳಿಸಲು ಗವರ್ನರ್ ಜನರಲ್ ವೆಲ್ಲೆಸ್ಲಿ ನೇಮಿಸಿದ್ದ ಐವರು ಕ್ಯಾಪ್ಟನ್‍ಗಳ ಸಮಿತಿಗೆ ಈತ ಸಹಕಾರ್ಯದರ್ಶಿಯಾಗಿದ್ದ. 

ತುಂಗಭದ್ರ ನದಿಯ ದಕ್ಷಿಣಕ್ಕಿರುವ ಪ್ರದೇಶಗಳ ಆಡಳಿತ ನಡೆಸುತ್ತ (1800-07) ರೈತವಾರಿ ಭೂಕಂದಾಯ ಪದ್ಧತಿ ಜಾರಿಗೆ ತಂದು ಜನಪ್ರಿಯನಾದ. 1813 ರಲ್ಲಿ ಕರ್ನಲ್ ಆಗಿ ಬಡ್ತಿ ಪಡೆದು ನ್ಯಾಯಾಡಳಿತ ಮತ್ತು ಪೋಲೀಸ್ ಇಲಾಖೆಗಳನ್ನು ಸುಧಾರಿಸಲು ನೇಮಿಸಲ್ಪಟ್ಟ. ಸೈನ್ಯ ಇಲಾಖೆಯಲ್ಲಿ ಬ್ರೀಗೇಡಿಯರ್ ಜನರಲ್ ಆಗಿ ನೇಮಕಗೊಂಡು ಪಿಂಡಾರಿಗಳು ಮತ್ತು ಮರಾಠರ ಮೇಲೆ ಯುದ್ಧ ಮಾಡಿದ (1817-81) ಸಂಡೂರನ್ನೂ ತಹಬಂದಿಗೆ ತಂದು, ಧಾರವಾಡದಲ್ಲಿ ಸೈನ್ಯ ಕಟ್ಟಿ ಡಂಬಂಳ, ಹುಬ್ಬಳ್ಳಿ, ಬಾದಾಮಿ ಮತ್ತು ಬೆಳಗಾಂವಿಗಳನ್ನು ಗೆದ್ದುಕೊಂಡ. 1820 ಜೂನ್‍ನಲ್ಲಿ ಮದ್ರಾಸ್ ಗವರ್ನರ್ ಆಗಿದ್ದು 1824-26ರ ಅವಧಿಯಲ್ಲಿ ನಡೆದ ಮೊದಲ ಬರ್ಮಾಯುದ್ಧದಲ್ಲಿ ಸಹಾಯ ಮಾಡಿದ.

ಮೈಸೂರಿನ ರಾಜರು ಮತ್ತು ರೆಸಿಡೆಂಟ್ ನಡುವೆ ಉಂಟಾಗಿದ್ದ ತಪ್ಪು ತಿಳಿವಳಿಕೆಯ ಪರಿಣಾಮವಾಗಿ ಹುಟ್ಟಿದ ವೈಮನಸ್ಯವನ್ನು ನಿವಾರಿಸಲು ಮನ್ರೋ ಮೈಸೂರಿಗೆ ಭೇಟಿಯಿತ್ತು (1825) ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ ಇಬ್ಬರ ನಡುವಣ ಸಂಬಂಧವನ್ನು ಉತ್ತಮ ಪಡಿಸಿದ.

ಕನ್ನಡ ಪ್ರದೇಶಗಳನ್ನೆಲ್ಲ ಒಂದೇ ಆಡಳಿತದಲ್ಲಿ ಒಟ್ಟುಗೊಡಿಸಬೇಕೆಂದು ಸೂಚಿಸಿದವರಲ್ಲಿ ಮನ್ರೋ ಮೊದಲಿಗ. ಕೃಷ್ಣಾನದಿಯ ದಕ್ಷಿಣಕ್ಕಿರುವ ಪ್ರದೇಶಗಳು ಸೊಲ್ಲಾಪುರದ ಸಾಂಗ್ಲಿ ಮತ್ತು ಮಿರಜಗಳ ಕೆಲವು ಪ್ರದೇಶಗಳನ್ನು ಮುಂಬಯಿ ಪ್ರಾಂತ್ಯದಿಂದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿದರೆ ಆಡಳಿತ, ವಿದ್ಯಾಭ್ಯಾಸ ಮತ್ತು ಸಾಮಾಜಿಕ ದೃಷ್ಟಿಯಿಂದ ಕನ್ನಡಿಗರೆಲ್ಲರ ಸಾಮರಸ್ಯಕ್ಕೆ ಅನುಕೂಲವಾಗುವುದೆಂದು ಈತ ವಾದಿಸಿದ. 1827 ಜುಲೈ 7ರಂದು ಕಾಲರ ಬೇನೆಯಿಂದ ಮಡಿದ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ